ಶ್ರೀನಗರ
	ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಒಂದು ಜಿಲ್ಲೆ. ದೆಹಲಿಯಿಂದ 876 ಕಿಮೀ ದೂರದಲ್ಲಿದೆ. ವಿಸ್ತೀರ್ಣ 2228 ಚ.ಕಿಮೀ. ಜನಸಂಖ್ಯೆ 11,83,493. ಭಾರತದ ಉತ್ತರದಲ್ಲಿರುವ ಶ್ರೀನಗರ ಜಮ್ಮು ಮತ್ತು ಕಾಶ್ಮೀರದ ಬೇಸಗೆ ರಾಜಧಾನಿ. ಭಾರತಕ್ಕೆ ಮುಕುಟಪ್ರಾಯ ವಾಗಿರುವ ಕಾಶ್ಮೀರ ಕಣಿವೆಯ ದೊಡ್ಡನಗರ ಹಾಗೂ ವಾಣಿಜ್ಯ ಕೇಂದ್ರ. ಇದು ಝೇಲಮ್ ನದಿಯ ಎರಡೂ ದಂಡೆಯ ಮೇಲೆ ಹರಡಿದಂತೆ ಬೆಳೆದಿದೆ. ಇದು ಭಾರತದ ಸ್ವಿಟ್ಜ್‍ರ್‍ಲೆಂಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ನಗರದ ಮಧ್ಯಭಾಗದಲ್ಲಿ ಹರಿಯುವ ಝೇಲಮ್ ನದಿ ಈ ನಗರದ ಜೀವನಾಡಿ. ಇದು ನಗರದ ಸೌಂದರ್ಯ ವೃದ್ಧಿಗೆ ಕಾರಣವಾಗಿರು ವುದಲ್ಲದೆ ಉತ್ತಮ ಜಲಮಾರ್ಗವಾಗಿದೆ.

	ಶ್ರೀನಗರದ ಸುತ್ತಲೂ ಇರುವ ಹಿಮಾಚ್ಛಾದಿತ ಶಿಖರಗಳು ನಗರದ ಸೌಂದರ್ಯ ವೃದ್ಧಿಗೆ ಕಾರಣವಾಗಿವೆ. ಇಲ್ಲಿನ ಸಿಹಿನೀರಿನ ಸರೋವರ ಗಳು ಹಾಗೂ ಪ್ರಸಿದ್ಧ ಉದ್ಯಾನಗಳು ಪ್ರವಾಸಿಗರನ್ನು ಆಕರ್ಷಿಸುವ ಮುಖ್ಯ ತಾಣಗಳಾಗಿವೆ. ದೇಶವಿದೇಶಗಳಿಂದ ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರು ಈ ನಗರಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಈ ನಗರ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ. ಸರೋವರಗಳ ನಗರವೆನಿಸಿರುವ ಇದರ ಮಧ್ಯಭಾಗದಲ್ಲಿ ದಾಲ್ ಸರೋವರವಿದೆ. ಇದು ಉತ್ತಮ ಜಲಮಾರ್ಗ ಹಾಗೂ ನೀರು ಸಂಗ್ರಹಣ ತಾಣವಾಗಿದೆ. ಈ ಸರೋವರ ದಲ್ಲಿರುವ ನೂರಾರು ದೋಣಿಮನೆಗಳು ಅತ್ಯಾಕರ್ಷಕವಾಗಿದ್ದು ಪ್ರವಾಸಿಗರಿಗೆ ಉತ್ತಮ ವಸತಿಕಲ್ಪಿಸುವ ವಿಹಾರಕೇಂದ್ರಗಳಾಗಿವೆ. ನಗರದ ಎರಡೂ ಅಂಚಿನಲ್ಲಿರುವ ಶಂಕರಾಚಾರ್ಯ ಹಾಗೂ ಹರಿಪರ್ಬತ್ ಬೆಟ್ಟಗಳು ಈ ನಗರಕ್ಕೆ ಸ್ವಾಭಾವಿಕ ರಕ್ಷಣಾಕೋಟೆಗಳಂತಿವೆ. 

	ಶಂಕರಾಚಾರ್ಯ ಬೆಟ್ಟದ ಮೇಲಿರುವ ಶಂಕರಾಚಾರ್ಯ ದೇವಾಲಯ (ಜ್ಯೇಷ್ಠೇಶ) ಕಾರ್ಕೋಟ ಶೈಲಿಯ ಪ್ರಾಚೀನ ಕಟ್ಟಡ. ಹರಿಪರ್ಬತ್ ಬೆಟ್ಟದ ಮೇಲೆ ಅನೇಕ ಪ್ರಾಚೀನ ಕೋಟೆಕೊತ್ತಲಗಳ ಅವಶೇಷಗಳಿವೆ.

	ಶ್ರೀನಗರ ಆಲ್ಪೈನ್ ಮಾದರಿಯ ವಾಯುಗುಣವನ್ನು ಹೊಂದಿದೆ. ತಂಪಾದ ಬೇಸಗೆ ಹಾಗೂ ಹೆಚ್ಚು ಚಳಿಯಿಂದ ಕೂಡಿದ ಚಳಿಗಾಲ ಇದರ ಪ್ರಮುಖ ಲಕ್ಷಣಗಳು. ಬೇಸಗೆಯ ಜೂನ್ ಮತ್ತು ಜುಲೈನಲ್ಲಿ ಸರಾಸರಿ ಉಷ್ಣಾಂಶ 320ಸೆ. ಗಳಷ್ಟಿದ್ದರೆ ಚಳಿಗಾಲದ ಜನವರಿ ಮಧ್ಯಭಾ ಗದಲ್ಲಿ ಉಷ್ಣಾಂಶ ಘನೀಭವಿಸುವ ಬಿಂದುವಿಗಿಂತಲೂ ಕಡಿಮೆಯಾಗು ತ್ತದೆ. ಚಳಿಗಾಲದಲ್ಲಿ ನದಿ ಹಾಗೂ ಸರೋವರ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಬೇಸಗೆಯಲ್ಲಿ ಮಾನ್‍ಸೂನ್ ಮಾರುತಗಳಿಂದ ಮಳೆಯಾದರೆ ಚಳಿಗಾಲದ ಪ್ರಾರಂಭದಲ್ಲಿ ಮಳೆ ಮತ್ತು ಹಿಮಪಾತ ಎರಡೂ ಒಟ್ಟಿಗೆ ಆಗುವುದುಂಟು. ನವೆಂಬರ್ ಶುಷ್ಕ ಹವೆಯಿಂದ ಕೂಡಿರುತ್ತದೆ. ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಪಶ್ಚಿಮದ ಕಡೆಯಿಂದ ಬೀಸುವ ಮೆಡಿಟೆರೇನಿಯನ್ ಸಮುದ್ರದ ಚಂಡಮಾರುತ ದಿಂದ ಮಳೆ ಹಾಗೂ ಹಿಮಪಾತ ಉಂಟಾಗಲು ಕಾರಣವಾಗಿದೆ. 

	ಶ್ರೀನಗರ ಬಹಳ ಹಿಂದಿನಿಂದಲೂ ರಾಜಧಾನಿಯಾಗಿತ್ತು ಎಂಬುದಕ್ಕೆ ಅನೇಕ ಚಾರಿತ್ರಿಕ ಕುರುಹುಗಳು ದೊರೆಯುತ್ತವೆ. ಚೀನಿ ಯಾತ್ರಿಕನಾದ ಯುವಾನ್ ಚಾಂಗ್ ತನ್ನ ಗ್ರಂಥದಲ್ಲಿ ಈ ನಗರದ ಬಗ್ಗೆ ಸಾಕಷ್ಟು ವಿವರಣೆ ನೀಡಿದ್ದಾನೆ. ಚಂದ್ರಗುಪ್ತನ ಮೊಮ್ಮಗ ಸಾಮ್ರಾಟ್ ಅಶೋಕ ಶ್ರೀನಗರವನ್ನು ಸ್ಥಾಪಿಸಿ ಅಲ್ಲಿ 96,000 ಮನೆಗಳನ್ನೂ ಅನೇಕ ಬೌದ್ಧ ಸ್ತೂಪಗಳನ್ನೂ ವಿಹಾರಗಳನ್ನೂ ಕಟ್ಟಿಸಿದನೆನ್ನಲಾಗಿದೆ. ಇಲ್ಲಿನ ವಿಜಯೇಶ್ವರ ದೇವಾಲಯದ ಸುತ್ತಲೂ ಕಲ್ಲುಗೋಡೆ ಕಟ್ಟಿಸಿ ದೇವಾಲಯ ವನ್ನು ಜೀರ್ಣೋದ್ಧಾರ ಮಾಡಿಸಿದ. ಈತ ಭೂತೇಶನ ಭಕ್ತನಾಗಿದ್ದಿರ ಬಹುದು ಎನ್ನಲಾಗಿದೆ. ಇಲ್ಲಿ ಆಳಿದ ಇಮ್ಮಡಿ ಪ್ರವರಸೇನ(410-70) ಪ್ರವರಪುರವನ್ನು (ಇಂದಿನ ಶ್ರೀನಗರವನ್ನು) ಸ್ಥಾಪಿಸಿದನೆಂದೂ ಪ್ರವರೇಶ್ವರ ದೇವಾಲಯವನ್ನು ಕಟ್ಟಿಸಿದನೆಂದೂ ಇವನ ವಂಶಸ್ಥನಾದ ರಾಣಾದಿತ್ಯನೆಂಬವನು ರಾಣಾಸ್ವಾಮಿ ದೇವಾಲಯ ಕಟ್ಟಿಸಿದನೆಂದೂ ತಿಳಿದುಬರುತ್ತದೆ. ಈಗ ಆ ಎರಡೂ ದೇವಾಲಯಗಳಿದ್ದ ಸ್ಥಳದಲ್ಲಿ ಬಹಾಉದ್ದೀನ್ ಮತ್ತು ಪೀರ್‍ಹಾಜ್ಜ ಎಂಬ ಮುಸ್ಲಿಮ್ ಗೋರಿಗಳಿವೆ. ಅಕ್ಬರ್ ಕಳುಹಿಸಿದ ಕಾಸಿಂಖಾನ್ 1586 ಅಕ್ಟೋಬರ್ 14ರಂದು ಶ್ರೀನಗರವನ್ನು ವಶಪಡಿಸಿಕೊಂಡು ಮೊಗಲರ ಆಳ್ವಿಕೆ ಸ್ಥಾಪಿಸಿದ. ಶ್ರೀನಗರದಲ್ಲಿ ಪ್ರಸಿದ್ಧ ಜಾಮೀಮಸೀದಿ, ಷಾಹಾ ಮಾದಾನ್ ಮಸೀದಿಗಳಿವೆ. ಇಡೀ ಕಾಶ್ಮೀರದಲ್ಲೇ ಬಹುದೊಡ್ಡದಾದ ಪತ್ಥರ್ ಮಸೀದಿ ನೂರ್ ಜಹಾನ್ ಕಟ್ಟಿಸಿದ್ದು. ಚಶ್ಮ-ಇ-ಷಾಹಿಯನ್ನು ಷಾಜಹಾನ್ 1632-33ರಲ್ಲಿ ನಿರ್ಮಿಸಿದ. ಯುವರಾಜನಾಗಿದ್ದ ದಾರಾಶಿಕೋ 1644ರಲ್ಲಿ ಸುಂದರ ಪರೀಮಹಲ್ ಕಟ್ಟಿಸಿದ.

	ಶ್ರೀನಗರ ಹಿಂದು ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿದ್ದರೂ 13 ಹಾಗೂ 14ನೆಯ  ಶತಮಾನದಲ್ಲಿ ಬಹುಪಾಲು ಜನರು ಮತಾಂತರ ಗೊಂಡ ಪರಿಣಾಮವಾಗಿ ಮುಸ್ಲಿಮರ ಸಂಖ್ಯೆ ಅಧಿಕವಾಯಿತು. ಇವರು ದೋಣಿ ನಡೆಸುವುದರಲ್ಲಿ ಪ್ರವೀಣರು. ಉಗ್ರಗಾಮಿಗಳ ಉಪಟಳದಿಂದ ಹಿಂದುಗಳು ದೇಶದ ಇತರ ಭಾಗಗಳಿಗೆ ವಲಸೆ ಹೋದದ್ದರ ಪರಿಣಾಮವಾಗಿ ಹಿಂದುಗಳ ಸಂಖ್ಯೆ ಕಡಿಮೆಯಾಯಿತು. ಹಿಂದಿ, ಉರ್ದು, ಕಾಶ್ಮೀರಿ ಇಲ್ಲಿನ ಪ್ರಮುಖ ಭಾಷೆಗಳು.

	ಶ್ರೀನಗರವನ್ನು ಆಡಳಿತದ ಅನುಕೂಲಕ್ಕಾಗಿ 8 ವಾರ್ಡ್‍ಗಳಾಗಿ ವಿಭಾಗಿಸಲಾಗಿದ್ದು ಅದರಲ್ಲಿ ಒಟ್ಟು 392 ಮೊಹಲ್ಲಾಗಳಿವೆ. ಈ ನಗರ ಕಳೆದ ಮೂರು ದಶಕಗಳಿಂದೀಚೆಗೆ ತ್ವರಿತಗತಿಯಲ್ಲಿ ವಿಸ್ತಾರಗೊ ಳ್ಳುತ್ತಿದೆ. ಮೊಗಲರಿಂದ ನಿರ್ಮಿಸಲ್ಪಟ್ಟ ಕಟ್ಟಡಗಳು ಹಾಗೂ ಸುಂದರ ಉದ್ಯಾನಗಳು ಈ ನಗರದ ಪ್ರಮುಖ ಆಕರ್ಷಣೆಗಳಾಗಿವೆ. ನಗರದ ಹಳೆಯ ಭಾಗಗಳನ್ನು ನವೀಕರಿಸಿ ಉತ್ತಮಗೊಳಿಸಲಾಗುತ್ತಿದೆ.

	ಇಲ್ಲಿ ನಿರ್ಮಿಸಲಾಗಿರುವ ಹಳೆಯ ಮನೆಗಳು ಪೂರ್ಣವಾಗಿ ಮರದ ವಸ್ತುಗಳಿಂದ ಕೂಡಿವೆ. ಪದೇ ಪದೇ ಬೆಂಕಿ ಅನಾಹುತಗಳಾಗುವುದನ್ನು ತಪ್ಪಿಸಲು ಹಾಗೂ ಹೆಚ್ಚು ಅನುಕೂಲ ಕಲ್ಪಿಸಲು ಈಚೆಗೆ ಕಾಂಕ್ರೀಟ್ ಕಟ್ಟಡಗಳು ಅಧಿಕ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿವೆ. ಮಳೆಗಾಲದಲ್ಲಿ ಹಾಗೂ ಬೇಸಗೆಯಲ್ಲಿ ತಗ್ಗು ಪ್ರದೇಶಗಳು ಪ್ರವಾಹದಿಂದಾವೃತ ವಾಗುವುದು ಸರ್ವೇಸಾಮಾನ್ಯ.

	ಶ್ರೀನಗರ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣಗೊಳ್ಳದಿದ್ದರೂ ಇಲ್ಲಿನ ಕೆಲವು ವಾಣಿಜ್ಯ ಕೇಂದ್ರಗಳು ವ್ಯಾಪಾರಕ್ಕೆ ಪ್ರಸಿದ್ಧಿಯಾಗಿವೆ. ಹೋಟೆಲ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಇಲ್ಲಿನ ಎರಡು ಪ್ರಮುಖ ರಸ್ತೆಗಳು. ಇದು ಪ್ರಮುಖ ಪ್ರವಾಸಿ ಕೇಂದ್ರವಾದ್ದರಿಂದ ಉತ್ತಮ ವಸತಿಗೃಹಗಳು, ಹೋಟೆಲ್‍ಗಳು ಅಧಿಕ ಸಂಖ್ಯೆಯಲ್ಲಿವೆ. ಪ್ರವಾಸೋದ್ಯಮ ಇಲ್ಲಿನ ಜನರ ಜೀವನಾಡಿ. ದೇಶವಿದೇಶಗಳಿಂದ ಬರುವ ಪ್ರವಾಸಿಗರು ಇಲ್ಲಿನ ಜನರ ಒಳ್ಳೆಯ ಆದಾಯ ಮೂಲವಾಗಿದ್ದಾರೆ. ಶ್ರೀನಗರದಲ್ಲಿ ಮೊಗಲರ ಕಾಲದ ಉದ್ಯಾನವನಗಳೂ ತೋಟಗಳೂ ಇವೆ. ಗುಲ್ಮಾರ್ಗ್ ಹೂ ತೋಟ, ಶಾಲಿಮಾರ್ ಉದ್ಯಾನವನಗಳ ಜೊತೆಗೆ ಪ್ರಸಿದ್ಧಿಪಡೆದಿರುವ ಹಜರತ್‍ಬಾಲ್ ಮಸೀದಿಯಿದೆ. ಇದರಲ್ಲಿ ಪ್ರವಾದಿಮುಹಮ್ಮದ್‍ರ ಒಂದು ತಲೆಕೂದಲನ್ನು ಇಡಲಾಗಿದೆ. ಏಷ್ಯದಲ್ಲೆ ಅತಿದೊಡ್ಡ ಸಿಹಿ ನೀರಿನ ವೂಲಾರ್ ಸರೋವರ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣ ಸ್ಥಳ. ಇಲ್ಲಿನ ನೆಹರೂ ಉದ್ಯಾನವನ, ಪ್ರತಾಪ್‍ಸಿಂಗ್ ವಸ್ತುಸಂಗ್ರಹಾಲಯ ನೋಡುವಂಥವು. 

	ಶ್ರೀನಗರ ಬಹು ಹಿಂದಿನಿಂದಲೂ ಪ್ರಮುಖ ವಿದ್ಯಾ ಕೇಂದ್ರವಾಗಿತ್ತು. ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾಲಯ ಈ ನಗರದಲ್ಲಿ ಸ್ಥಾಪಿತವಾಗಿದೆ. ಇಲ್ಲಿ ಅನೇಕ ಶಾಲಾ ಕಾಲೇಜುಗಳೂ ವೃತ್ತಿ ಶಿಕ್ಷಣ ಸಂಸ್ಥೆಗಳೂ ಇವೆ. ಇತ್ತೀಚೆಗೆ ಉದಮ್‍ಪುರದಿಂದ ಶ್ರೀನಗರದವರೆಗೆ ರೈಲುಮಾರ್ಗ ನಿರ್ಮಿಸಲು ಯೋಜಿಸಲಾಗಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		
				(ಆರ್.ಎಸ್.ಇ.)